Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವ ನಮ್ಮ ಶಾಲೆಯಲ್ಲಿ...

17 August 2017

ಕಲೋತ್ಸವ ಸಂಘಟನಾ ಸಮಿತಿ ರೂಪೀಕರಣ ಸಭೆ

ಈ ಅಧ್ಯಯನ ವರ್ಷದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ನಮ್ಮ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಸಂಘಟನಾ ಸಮಿತಿ ರೂಪೀಕರಣ ಸಭೆಯನ್ನು ಅಗೋಸ್ತು 23 ರಂದು ಅಪರಾಹ್ನ 3.15ಕ್ಕೆ ಕರೆಯಲಾಗಿದೆ. ಕುಂಬಳೆ ಉಪಜಿಲ್ಲೆಯ ವ್ಯಾಪ್ತಿಗೊಳಪಡುವ ಕೇರಳ ಸರಕಾರದ ಎಲ್ಲ ಅಂಗೀಕೃತ ಶಾಲೆಗಳ ಅಧಿಕೃತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆಗಳನ್ನು ನೀಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಅಪೇಕ್ಷೆ.

15 August 2017

ಸ್ವಾತಂತ್ರ್ಯ ದಿನಾಚರಣೆ


ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಇಂದು ನಮ್ಮ ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನೀರ್ಚಾಲು ಪೇಟೆಯಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಮಾತನಾಡಿದರು.

ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕಂಬಾರು, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿದರು.  ಶಾಲಾ ಹಿರಿಯ ಶಿಕ್ಷಕಿ ಕೆ.ವಿನೋದಿನಿ ವಂದಿಸಿದರು. ಸಂಚಾಲಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

02 August 2017

CPCRI ಗೆ ಭೇಟಿನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳು ಇಂದು ಸಿ.ಪಿ.ಸಿ.ಆರ್.ಐ ಕಾಸರಗೋಡನ್ನು ಸಂದರ್ಶಿಸಿದರು. ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಮಣಿಕಂಠನ್ ವಿದ್ಯಾರ್ಥಿಗಳಿಗೆ ಕಸಿ ಕಟ್ಟುವ ಕುರಿತು ಮತ್ತು ಮುರಳಿಕೃಷ್ಣ ಕಿಳಿಂಗಾರು ಟಿಶ್ಯೂ ಕಲ್ಚರ್ ಕುರಿತಾದ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಶಿಕ್ಷಕರಾದ ಕೃಷ್ಣಪ್ರಸಾದ.ಟಿ, ಅವಿನಾಶ ಕಾರಂತ.ಎಂ ಮತ್ತು ಪೂರ್ಣಿಮಾ ನೇತೃತ್ವ ನೀಡಿದರು.

28 July 2017

ರಕ್ಷಕ ಶಿಕ್ಷಕ ಸಂಘದ ಮಹಾಸಭೆ


“ವಿವಿಧ ರೋಗಗಳ ಹರಡುವಿಕೆಯನ್ನು ನಿಯಂತ್ರಿಸಲು ರೋಗಗಳನ್ನು ತಡೆಗಟ್ಟುವ ಚುಚ್ಚುಮದ್ದುಗಳನ್ನು ಮಕ್ಕಳಿಗೆ ಸಕಾಲದಲ್ಲಿ ನೀಡಬೇಕಾಗುವುದು ಅಗತ್ಯ. ಈ ಬಗ್ಗೆ ಕೇಂದ್ರ ಸರಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸದ್ಯದಲ್ಲಿಯೇ ಮಕ್ಕಳಿಗೆ ಎಂ.ಆರ್ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಈ ಮಹತ್ತರ ಯೋಜನೆಗೆ ಎಲ್ಲ ರಕ್ಷಕರು ಸಹಕಾರ ನೀಡಿ, ಈ ರೋಗಗಳನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಬೇಕು" ಎಂದು ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಲಲಿತಾ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ ಅಬಕಾರಿ ಇಲಾಖೆಯ ವಿಜಯನ್ ಪಿ.ಎಸ್ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಎಸ್. ನಾರಾಯಣ ಇವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ವರದಿ ವಾಚಿಸಿದರು. ಹಿರಿಯ ಶಿಕ್ಷಕಿ ಕೆ.ವಿನೋದಿನಿ ವಂದಿಸಿದರು. ಶಿಕ್ಷಕ ಶಿವಪ್ರಕಾಶ್.ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.

25 July 2017

ಹಾಯ್... ಕುಟ್ಟಿಕೂಟಂ


ಎಂಟನೇ ತರಗತಿಯ ಆಯ್ದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ತಜ್ಞರಾಗಿ ಬೆಳೆಸುವ ಯೋಜನೆಯನ್ನು ನಮ್ಮ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ IT@School ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ Hi...Kuttikootam ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಮ್ಮ ಶಾಲೆಯಿಂದ ಆಯ್ದ 20 ಮಂದಿ ವಿದ್ಯಾರ್ಥಿಗಳಿಗೆ ಈ ಮೂಲಕ ಕಂಪ್ಯೂಟರ್ ಹಾರ್ಡ್‍ವೇರ್, ಎನಿಮೇಶನ್, ಇಲೆಕ್ಟ್ರೋನಿಕ್ಸ್, ಮಾತೃಭಾಷೆಯಲ್ಲಿ ಟೈಪಿಂಗ್ ಮತ್ತು ಕಂಪ್ಯೂಟರ್ ಸುರಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು.

ಈ ಕಾರ್ಯಕ್ರಮವನ್ನು ಇಂದು ಅಪರಾಹ್ನ 4 ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಜಯದೇವ ಖಂಡಿಗೆ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಸಭೆಯ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶುಭಾಶಯಗಳನ್ನು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ರವಿಶಂಕರ ಸ್ವಾಗತಿಸಿ, ವಿಶ್ವನಾಥ ಭಟ್ ವಂದಿಸಿದರು.

21 July 2017

ನೃತ್ಯಾಂಗನ್ ಸಂಸ್ಥೆಯಿಂದ ಭರತನಾಟ್ಯದ ಪರಿಚಯ

ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ಶ್ರೀಮತಿ ರಾಧಿಕಾ ಶೆಟ್ಟಿ ಇವರು ಇಂದು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಭರತನಾಟ್ಯದ ಪರಿಚಯವನ್ನು ಮಾಡಿಕೊಟ್ಟರು. ವಿವಿಧ ಮುದ್ರೆಗಳು, ಭಂಗಿಗಳ ಮೂಲಕ ನೃತ್ಯ ಲೋಕದ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ರಾಧಿಕಾ ಅವರಿಗೆ ಧನ್ಯವಾದಗಳು...

ಶೇಖರಕಾನಕ್ಕೆ ಪಯಣ

ಶೇಖರಕಾನ ನಮ್ಮ ಶಾಲೆಯ ವಿದ್ಯಾರ್ಥಿಗಳ ನೆಚ್ಚಿನ ತಾಣ. ಶಾಲೆಯಿಂದ ಅನತಿ ದೂರದಲ್ಲಿರುವ ಈ ಸ್ಥಳದ ಪ್ರವಾಸದ ಫೋಟೋಗಳನ್ನು ಪ್ರದರ್ಶಿಸಲು ನಮಗೆ ಯಾವತ್ತೂ ಸಂತಸವಾಗುತ್ತದೆ. ಮಳೆಗಾಲದಲ್ಲೆಲ್ಲ ನಮ್ಮನ್ನು ಆಕರ್ಷಿಸುವ ಶೇಖರಕಾನ ಜಲಪಾತಕ್ಕೆ ಇಂದೂ ಹೋಗಿ ಬಂದಿದ್ದೇವೆ. ಹೊಸ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿದ್ದೇವೆ.

17 July 2017

ತರಕಾರಿ ಬೀಜ ವಿತರಣೆ_2017

ಕೇರಳ ಸರಕಾರದ ಕೃಷಿ ಇಲಾಖೆಯು ಕೃಷಿ ಭವನದ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿ ಪ್ರೀತಿಯನ್ನು ಬೆಳೆಸಲು ಕೊಡಮಾಡಿದ ತರಕಾರಿ ಬೀಜಗಳನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯರು ಇಂದು ವಿದ್ಯಾರ್ಥಿಗಳಿಗೆ ವಿತರಿಸಿದರು. ಕೃಷಿ ಪ್ರೀತಿ ಬೆಳೆಯಲಿ...

05 July 2017

ವಿದ್ಯಾರ್ಥಿಗಳಿಂದ ಗದ್ದೆಗೆ ಭೇಟಿ


ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲಾ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣಪ್ರಸಾದ್ ಬಣ್ಪುತ್ತಡ್ಕ, ನಂದಕುಮಾರ್, ಅವಿನಾಶ ಕಾರಂತ ಪಾಡಿ, ಶ್ರೀಮತಿ ಮಾಲತಿ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಸುಧಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

30 June 2017

ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ


“ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಅಗತ್ಯ. ಶಾಲೆಯಲ್ಲಿರುವ ವಿವಿಧ ಸಂಘಗಳು ಇದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತವೆ. ವಿದ್ಯಾರ್ಥಿಗಳು ಇಂತಹ ಸಂಘಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು.” ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿರಿಯ ಶಿಕ್ಷಕ ಸೂರ್ಯನಾರಾಯಣ.ಎಚ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ಸರಸ್ವತಿ.ಸಿ.ಎಚ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿದ್ಯಾರ್ಥಿನಿ ಶರ್ವಾಣಿ.ಕೆ ಸ್ವಾಗತಿಸಿ ಕಾರ್ತಿಕ್ ಕೃಷ್ಣ.ಕೆ ವಂದಿಸಿದರು. ಅದಿತಿ.ಕೆ ಮತ್ತು ಮುರಳೀಮಾಧವ.ಸಿ ಕಾರ್ಯಕ್ರಮ ನಿರೂಪಿಸಿದರು.

27 June 2017

ತರಗತಿಯೊಳಗೆ ವಸ್ತು ಪ್ರದರ್ಶನ


ಹೊಸತಾಗಿ ನಮ್ಮ ಶಾಲೆಗೆ ಕಾಲಿರಿಸಿದ ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆ ಗಮನ ನೀಡಿ ಅದನ್ನು ಅಕ್ಕರೆಯಿಂದ ಶಾಲೆಗೆ ಹೊತ್ತು ತಂದು ಇಂದು ತರಗತಿಯಲ್ಲಿ ಪ್ರದರ್ಶಿಸಿ ಸಂತಸಪಟ್ಟುಕೊಂಡರು. ಹಳೆಯ ಕಾಲದ ನಾಣ್ಯಗಳು, ಅಳತೆ ಪಾತ್ರೆಗಳು, ಉಪ್ಪಿನ ಮರಿಗೆ... ಇತ್ಯಾದಿ ವಸ್ತುಗಳನ್ನು ಕಂಡವರಿಗೆ ಪ್ರದರ್ಶಿಸುವ ಕುತೂಹಲ, ನೋಡದವರಿಗೆ ವೀಕ್ಷಿಸುವ ಕುತೂಹಲ. ಇಂದು ಐದನೇ ತರಗತಿಯಲ್ಲಿ ಇಂತಹ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಜರಗಿತು.

21 June 2017

ಯೋಗ ದಿನಾಚರಣೆನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್.ಪಿ.ಎಚ್ ಇವರ ನೇತೃತ್ವದಲ್ಲಿ ಇಂದು ಯೋಗ ದಿನಾಚರಣೆ ನಡೆಯಿತು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಚ್.ಸೂರ್ಯನಾರಾಯಣ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೃಷ್ಣಪ್ರಸಾದ.ಟಿ ಕಾರ್ಯಕ್ರಮ ನಿರೂಪಿಸಿದರು.

15 June 2017

ಎಡನೀರು ಯಕ್ಷಗಾನ ಶಿಬಿರ ಸಂದರ್ಶನ


ಎಡನೀರು ಮಠದ ಆವರಣದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿಯನ್ನು ಇಂದು ಮಕ್ಕಳೊಂದಿಗೆ ವೀಕ್ಷಿಸಿ ಬಂದೆವು. ಶಾಲಾ ಬಸ್ಸಿನಲ್ಲಿ ಎಡನೀರಿಗೆ ತೆರಳಿ ಅಲ್ಲಿನ ಶಿಬಿರವನ್ನು ನೋಡಿ, ಸಂದೇಹವನ್ನು ಪರಿಹರಿಸಿ ಹಿಂತಿರುಗಿದಾಗ ಮಕ್ಕಳಿಗೆ ಅಪಾರ ಖುಷಿಯಾಯಿತು.

06 June 2017

ಶಾಲಾ ಸುರಕ್ಷಾ ಸಮಿತಿ


ಶಾಲಾ ಪರಿಸರದಲ್ಲಿ ಮಾದಕ ದ್ರವ್ಯ ಉಪಯೋಗವನ್ನು ನಿಯಂತ್ರಿಸಲು ಮತ್ತು ಶಾಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸಲು ಶಾಲಾ ಸುರಕ್ಷಾ ಸಮಿತಿಯನ್ನು ಇಂದು ರೂಪೀಕರಿಸಲಾಯಿತು. ಈ ಸಮಿತಿಯು ಶಾಲೆ ಮತ್ತು ಪರಿಸರದ ವಾತಾವರಣವನ್ನು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಉಳಿಸಲಿದೆ. ಈ ಸಮಿತಿಯ ಪದಾಧಿಕಾರಿಗಳನ್ನು ಇಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಸಂಚಾಲಕರಾಗಿ ಬದಿಯಡ್ಕ ಪೋಲೀಸ್ ಠಾಣೆಯ ಎಸ್.ಐ ಅಂಬಾಡಿ.ಕೆ.ಆರ್ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಶಾಲಾ ಮಾತೃ ಸಮಿತಿಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ.ಕೆ, ಶಾಲಾ ಶಿಕ್ಷಕರಾದ ಶ್ರೀಮತಿ ವಿನೋದಿನಿ.ಕೆ, ಶಿವಪ್ರಕಾಶ್.ಎಂ.ಕೆ, ಸಂತೋಷ್.ಪಿ.ಎಚ್, ರಂಜಿತ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ, ಆಟೋರಿಕ್ಷಾ ಡ್ರೈವರ್ ಸದಾನಂದ.ಪಿ ಮತ್ತು ಶಾಲಾ ಬಸ್ ಚಾಲಕ ಗಂಗಾಧರ.ಪಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಶಾಲಾ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಶಾಲೆಯನ್ನು ಸುರಕ್ಷಿತವಾಗಿ ಇರಿಸಲಿದೆ.

05 June 2017

ವಿಶ್ವಪರಿಸರ ದಿನಾಚರಣೆ


ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶಾಲಾ ಪರಿಸರದಲ್ಲಿ ಗಿಡವನ್ನು ನೆಟ್ಟು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ, ಶಿಕ್ಷಕರಾದ ಗೋವಿಂದ ಶರ್ಮ.ಕೆ, ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಸಂತೋಷ್, ಹಿರಿಯ ಶಿಕ್ಷಕಿ ಅನ್ನಪೂರ್ಣ ಮತ್ತು ಸರಿತಾ. ಪಿ.ಎಸ್ ಉಪಸ್ಥಿತರಿದ್ದರು.

01 June 2017

ಶಾಲಾ ಪ್ರವೇಶೋತ್ಸವ


ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವವು ಇಂದು ಜರಗಿತು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು. ನೂತನ ಶೈಕ್ಷಣಿಕ ವರ್ಷಕ್ಕೆ ‘ಮಹಾಜನ’ ದ ಶುಭಾಶಯಗಳು...

05 May 2017

ಹತ್ತನೇ ತರಗತಿ_ಉತ್ತಮ ಫಲಿತಾಂಶ


2016-17ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಶಾಲೆಯ ಹತ್ತು ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ನಮ್ಮ ಶಾಲೆಯ ಹತ್ತು ಡಿ ತರಗತಿಯ ಅನಿಶ.ಎನ್, ಅರ್ಚನ.ಜಿ, ಮಹಿಮ ಎಚ್.ಎನ್, ಮಂಜುಷ ಪಿ.ಎಸ್, ಸಂಪನ್ನ ಎಂ.ಎನ್, ಶ್ರೀಹರ್ಷ ಪ್ರಸಾದ್.ಎಸ್, ಚಿನ್ಮಯ ಭಟ್ ಕೆ.ಕೆ, ಶರಣ್ ಕುಮಾರ್ ಮತ್ತು ಹತ್ತು ಬಿ ತರಗತಿಯ ನಂದನ ಕೆ.ಎ, ಶ್ರೀಧ್ವಜ್.ಎ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ನಮ್ಮ ಶಾಲೆಯಲ್ಲಿ 200 ಮಂದಿ ಪರೀಕ್ಷೆ ಬರೆದಿದ್ದು 196 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 98% ಫಲಿತಾಂಶವನ್ನು ತಂದಿದ್ದಾರೆ. ವಿಜೇತರಿಗೆ ಶುಭಾಶಯಗಳು...

15 March 2017

‘ಹಿರಿಮೆ - ಉತ್ಸವ’- 2017“ವಿದ್ಯಾರ್ಥಿಗಳಲ್ಲಿ ಓದುವ, ಆಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಶಾಲಾ ದಿನಗಳಲ್ಲಿ ಮಕ್ಕಳ ಮನಸ್ಸು ಸರ್ವಾಂಗೀಣ ವಿಕಾಸ ಹೊಂದಬೇಕು. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಹಿರಿಮೆ ಅಂತಹ ಒಂದು ಚಟುವಟಿಕೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬೆಳೆಯಬೇಕಾದ ಶಾಲಾ ದಿನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.” ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ಹಿರಿಮೆ - ಉತ್ಸವ’ದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕುಂಬಳೆ ಬಿ.ಆರ್.ಸಿ ಯ ಸೀಮಂತಿನಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮತ್ತು ಕುಂಬಳೆ ಬಿ.ಆರ್.ಸಿ ಯ ರೋಜಾ ಟೀಚರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ಸ್ವಾಗತಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ವಂದಿಸಿದರು. ಹಿರಿಯ ಶಿಕ್ಷಕ ಎಚ್.ಶಿವಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

‘ಗಣಿತೋತ್ಸವ’ - 2017


“ಪುರಾತನ ಕಾಲದಿಂದಲೇ ಗಣಿತ ಶಾಸ್ತ್ರದ ಕಡೆಗೆ ಭಾರತವು ಅನನ್ಯವಾದ ಕೊಡುಗೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಗಣಿತ ಶಾಸ್ತ್ರದ ಕಡೆಗೆ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಲು ಶಾಲೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಚಟುವಟಿಕೆಗಳು ವಿದ್ಯಾರ್ಥಿಯ ಗಣಿತ ಕೌಶಲವನ್ನು ಹೆಚ್ಚಿಸುತ್ತವೆ” ಎಂದು ಕುಂಬಳೆ ಬಿ.ಆರ್.ಸಿ ಯ ರೋಜಾ ಟೀಚರ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ಗಣಿತೋತ್ಸವ’ದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮತ್ತು ಕುಂಬಳೆ ಬಿ.ಆರ್.ಸಿಯ ಸೀಮಂತಿನಿ ಟೀಚರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ಸ್ವಾಗತಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ವಂದಿಸಿದರು. ಹಿರಿಯ ಶಿಕ್ಷಕ ಎಚ್.ಶಿವಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

27 January 2017

ಶಾಲಾ ವಾರ್ಷಿಕೋತ್ಸವ


“ಶಾಲಾ ವಾರ್ಷಿಕೋತ್ಸವಗಳು ನಮ್ಮ ಬಾಲ್ಯದ ನೆನಪನ್ನು ಚಿರಸ್ಮರಣೀಯವಾಗಿ ಉಳಿಸುತ್ತವೆ. ಹಿಂದಿನ ಕಾಲದಲ್ಲಿ ದಿನಪೂರ್ತಿ ಕಾರ್ಯಕ್ರಮಗಳು ಜರಗುತ್ತಿದ್ದವು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆಧುನಿಕ ಸಂವಹನ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಬಳಸಲು ಆರಂಭಿಸಿರುವುದು ಸಾಂಸ್ಕೃತಿಕ ವಾತಾವರಣವನ್ನು ಬದಲಾಯಿಸಿದೆ. ಮೊಬೈಲಿನ ಅಧಿಕ ಉಪಯೋಗ ವಿದ್ಯಾರ್ಥಿಗಳಲ್ಲಿ ಓದುವ, ಆಡುವ ಅಭ್ಯಾಸವನ್ನು ಕಡಿಮೆ ಮಾಡಿವೆ. ಈ ಸ್ಠಿತಿ ಖೇದಕರ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬೆಳೆಯಬೇಕಾದ ಶಾಲಾ ದಿನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾಹಿತ್ಯ, ಸಾಂಸ್ಕೃತಿಕ, ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸರ್ವಾಂಗೀಣ ವಿಕಾಸಕ್ಕೆ ಒಳಗಾಗಬೇಕು.” ಎಂದು ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ಹರಿಕೃಷ್ಣ ಭರಣ್ಯ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಮತ್ತು ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಮತಿ ರೇವತಿ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಾದ ಎಚ್. ಶಿವಕುಮಾರ, ಮಾಲತಿ.ಎಂ, ವೇಣುಗೋಪಾಲಕೃಷ್ಣ.ಇ ಮತ್ತು ಶಿಕ್ಷಕೇತರ ಸಿಬ್ಬಂದಿ ಗೋಪಾಲ ನಾಯ್ಕ.ಎನ್ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.

ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟರಾಜ.ಸಿ.ಎಚ್ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ವಂದಿಸಿದರು. ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಕೋರಿಕ್ಕಾರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.