Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 November 2013

ಶ್ರೀಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ಕೊಡುಗೆ


“ಸಮಾಜದ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಕ್ಷೇತ್ರ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ರೂಪಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡಿನಲ್ಲೂ ಸಂಘಟನೆಯನ್ನು ರೂಪಿಸಿ ಸಂಸ್ಥೆಯು ಜನಪ್ರೀತಿಯನ್ನು ಗಳಿಸುತ್ತಿದೆ. ಈ ನಿಟ್ಟಿನಲ್ಲಿ ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಕೈಜೋಡಿಸುತ್ತಿದೆ. ಆ ಮೂಲಕ ಧರ್ಮಸ್ಥಳದ ಖಾವಂದರಾದ ಸನ್ಮಾನ್ಯ ವೀರೇಂದ್ರ ಹೆಗ್ಗಡೆಯವರು ಈ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ತಮ್ಮ ಅಚ್ಚಳಿಯದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಡಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತಿರುವ ರೂಪಾಯಿ ಐದು ಲಕ್ಷ ದೇಣಿಗೆಯನ್ನು ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊ| ಕಾನತ್ತಿಲ ಮಹಾಲಿಂಗ ಭಟ್ಟರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್, ಪಡಿಯಡ್ಪು ಶಂಕರ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಮಂಜುನಾಥ ಮಾನ್ಯ ಮತ್ತು ಶ್ರೀಮತಿ ಸೌಮ್ಯಾ ಮಹೇಶ್ ನಿಡುಗಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಶಾಲಾ ಶಿಕ್ಷಕ ಎಚ್. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.

26 November 2013

ಮಹಾಜನ ಶತಮಾನೋತ್ಸವ ಭವನ ‘ಸಮರ್ಪಣೆ’ಗೆ ಸಿದ್ಧ


ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೇ ವರ್ಷದ ಅಗೋಸ್ತು 19 ರಂದು ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಆ ದಿನದ ಗ್ರಹಗತಿ ಅತ್ಯುತ್ತಮವಾಗಿದ್ದು ಕಟ್ಟಡದ ಕಾಮಗಾರಿ ಅತ್ಯಂತ ವೇಗವಾಗಿ ಪೂರ್ತಿಗೊಳ್ಳಲಿದೆ ಎಂದು ಶುಭ ಹಾರೈಸಿದ್ದರು. ಅವರ ನುಡಿಯಂತೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಈಗ ಪೂರ್ಣಗೊಳ್ಳುವ ಹಂತ ತಲಪಿದೆ.

ಕನ್ನಡ ಕರಾವಳಿಯ ನಾಡಿಗೆ ಸುಸಂಸ್ಕೃತ ವಿದ್ವಾಂಸ ಪರಂಪರೆಯ ಶ್ರೇಷ್ಠ ಸಾಂಸ್ಕೃತಿಕ, ಸಾಮಾಜಿಕ, ನಾಗರಿಕ ಪರಂಪರೆಯನ್ನೊದಗಿಸಿದ ಈ ಶಾಲೆ ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಲೆಗೆ ಬೆನ್ನೆಲುಬಾಗಿ ಬೆಳೆದಿರುವುದು ಕಟ್ಟಡ ನಿರ್ಮಾಣದ ಕಾರ್ಯ ವೇಗ ಪಡೆದುಕೊಳ್ಳಲು ಮೂಲ ಕಾರಣವಾಗಿದೆ. ಪೆರಡಾಲ ದೇವಸ್ಥಾನದಲ್ಲಿ ಪ್ರಾರಂಭಗೊಂಡು 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತ್ತು. ಶಾಲಾ ಕಟ್ಟಡವೂ ಸುಮಾರು ಅಷ್ಟೇ ಹಳೆಯದಾಗಿರುವುದರಿಂದ ಆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲು ಶಾಲಾ ಆಡಳಿತ ಸಮಿತಿ ತೀರ್ಮಾನಿಸಿತ್ತು. ಶಾಲಾ ಆಡಳಿತ ಮಂಡಳಿಯ ವಿನಂತಿ ಮೇರೆಗೆ ಸೆಪ್ಟೆಂಬರ್ 2 ರಂದು ಶಾಲೆಗೆ ಭೇಟಿ ನೀಡಿದ ನೂತನ ಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿ ಐ. ಸತ್ಯನಾರಾಯಣ ಭಟ್ ಹಳೆಯ ಕಟ್ಟಡವನ್ನು ಕೆಡವಲು ಅನುಮತಿ ನೀಡಿದ್ದರು.

        ಸರಕಾರೀ ಅಂಗೀಕಾರ ಗಳಿಸಿಕೊಂಡು ಹಳೆಯ ನಾಲ್ಕಂಕಣದ ಕಟ್ಟಡವನ್ನು ಕೆಡಹುವ ಕಾರ್ಯ ಓಣಂ ರಜೆಯ ಜೊತೆಗೆ ಸೆಪ್ಟೆಂಬರ್ 11 ರಂದು ಆರಂಭವಾಗಿತ್ತು. ಇತರ ಕಟ್ಟಡಗಳು ಸಾಕಷ್ಟು ಲಭ್ಯವಿರುವುದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡವನ್ನು ಕೆಡಹುವ ಕಾರ್ಯಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಶಾಲಾ ತರಗತಿಗಳನ್ನು ಪುನರ್ ವಿನ್ಯಾಸಗೊಳಿಸಿ, ಶಾಲಾ ಅಧ್ಯಯನ ವರ್ಷದ ದ್ವಿತೀಯಾರ್ಧ ಆರಂಭವಾಗುವಾಗ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವೇಗದ ಚಾಲನೆ ದೊರೆತಿತ್ತು. ಸಮಾಜದ ಎಲ್ಲ ಸಜ್ಜನರ ಆಶಯದಂತೆ, ಅತ್ಯಂತ ವೇಗವಾಗಿ ಸಾಗಿದ ಈ ಕಾರ್ಯ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಆ ಮೂಲಕ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳು ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕೆ ದೊರೆಯಲಿದೆ. ಪ್ರಸ್ತುತ ಒಂದು ಸಾವಿರ ಮಂದಿ ಮಳೆಗಾಲದಲ್ಲೂ ಆರಾಮವಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ವಿಶಾಲ ಸಭಾಂಗಣ ನಿರ್ಮಾಣ ಕಾರ್ಯ ಆರಂಭವಾಗಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮತ್ತು ಸಭಾಂಗಣಕ್ಕೆ ಅಂದಾಜು 2 ಕೋಟಿ ರೂಪಾಯಿ ಖರ್ಚು ನಿರೀಕ್ಷಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚವಾಗಿದೆ.

        ಅಂದ ಹಾಗೆ ದಶಂಬರ 20,21 ಮತ್ತು 22 ರಂದು ವೈಭವದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾವು ಕುಟುಂಬ ಸಮೇತರಾಗಿ ಬನ್ನಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಡಿ...

25 November 2013

ದಶಂಬರ 7 ರಂದು ಹಳೆವಿದ್ಯಾರ್ಥಿಗಳ ಕ್ರೀಡಾಕೂಟ, ಬನ್ನಿ...


ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು 2013 ದಶಂಬರ್ 7, ಶನಿವಾರ ಶಾಲಾ ಮೈದಾನದಲ್ಲಿ ನಡೆಸಲಾಗುವುದು. 25 ವರ್ಷಕ್ಕಿಂತ ಕೆಳಗಿನ ಪ್ರಾಯದ ಹಳೆ ವಿದ್ಯಾರ್ಥಿಗಳಿಗೆ 100 ಮೀ ಓಟ, 200 ಮೀ ಓಟ, 400 ಮೀ. ಓಟ, ಶೋಟ್‌ಪುಟ್, ಲೋಂಗ್ ಜಂಪ್, ಹೈಜಂಪ್ ಸ್ಪರ್ಧೆಗಳನ್ನು ನಡೆಸಲಾಗುವುದು. 25 ವರ್ಷಕ್ಕಿಂತ ಹಿರಿಯರಿಗೆ 100 ಮೀ ಓಟ, 200 ಮೀ ಓಟ, ಶೋಟ್‌ಪುಟ್ ಮತ್ತು ಲೋಂಗ್ ಜಂಪ್ ಸ್ಪರ್ಧೆಗಳು ನಡೆಯುವುದು. ಹಳೆ ವಿದ್ಯಾರ್ಥಿಗಳಿಗೆ ಯಾವುದಾದರೂ ಮೂರು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ. ಸೂರ್ಯನಾರಾಯಣ (9446034086) ಅವರನ್ನು ಸಂಪರ್ಕಿಸಬಹುದು.

19 November 2013

ವೃತ್ತಿ ಪರಿಚಯ ಮೇಳ - ರಾಜ್ಯ ಮಟ್ಟಕ್ಕೆ ಮನೋಜ್ ಕುಮಾರ್

ಪಿಲಿಕ್ಕೋಡಿನಲ್ಲಿ ಜರಗಿದ 2013-14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಪೌಷ್ಟಿಕಾಂಶಯುಕ್ತ ಆಹಾರ ತಯಾರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮನೋಜ್ ಕುಮಾರ್. ಈತ ನಾರಾಯಣಮಂಗಲ ನಿವಾಸಿ ನಾರಾಯಣ ಪ್ರಕಾಶ್ ಮತ್ತು ಸಾವಿತ್ರಿ ಇವರ ಪುತ್ರ. ಶುಭಾಶಯಗಳು...

ವಿಜ್ಞಾನ ಮೇಳ ರಾಜ್ಯ ಮಟ್ಟಕ್ಕೆ ಆಯ್ಕೆ

ಪಿಲಿಕ್ಕೋಡಿನಲ್ಲಿ ಜರಗಿದ 2013-14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಪ್ರೌಢಶಾಲಾ ವಿಭಾಗದ ಸ್ಥಿರ ಮಾದರಿಯಲ್ಲಿ ‘ಪ್ಲಾಸ್ಟಿಕ್‌ನಿಂದ ಪಾಲಿಸ್ಟರ್ ತಯಾರಿ - ಪರಿಸರ ಸಹ್ಯ ಪ್ಲಾಸ್ಟಿಕ್ ವಿಲೇವಾರಿ ವಿಧಾನ ಮತ್ತು ನಗರ ಮಾಲಿನ್ಯ ನಿವಾರಣೆಯ ವ್ಯವಸ್ಥೆಗೆ’ಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ಶಾಲೆಯ  ಎಂಟನೇ ತರಗತಿಯ ನಿಸರ್ಗ.ಕೆ(ಕೇಶವಪ್ರಸಾದ್ ಕೊಡ್ವಕೆರೆ - ಭಾರತಿ. ಎಂ.ಜಿ ಇವರ ಪುತ್ರಿ) ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ.ಬಿ (ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ). ಶುಭಾಶಯಗಳು...

15 November 2013

ಕಬಡ್ಡಿ ರಾಜ್ಯ ತಂಡಕ್ಕೆ ಆಯ್ಕೆ - ರಮ್ಯಾ. ಆರ್



ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಬಾಲಕಿಯರ ಕಬಡ್ಡಿ ಚಾಂಪಿಯನ್‍ಶಿಪ್ (ಪೈಕ) ನಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ರಮ್ಯಾ. ಆರ್ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಶುಭಾಶಯಗಳು...