Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 December 2013

ಶತಮಾನೋತ್ಸವಕ್ಕೆ ಸಂಭ್ರಮದ ತಯಾರಿ


ಶತಮಾನೋತ್ಸವದ ಸಡಗರದಲ್ಲಿರುವ ನಮ್ಮ ವಿದ್ಯಾಸಂಸ್ಥೆಗಳಿಗೆ ಹಳೆವಿದ್ಯಾರ್ಥಿಗಳ ಸಾಧನೆಗಳ ಸುದ್ದಿಗಳು ಸಂಭ್ರಮವನ್ನು ಹೆಚ್ಚಿಸಿದೆ. ನಮ್ಮ ಶಾಲೆಯ  ಹಳೆವಿದ್ಯಾರ್ಥಿಗಳಾದ ಮಮತಾ.ಎ, ಮಮತಾ. ಸಿ.ಎನ್ ಮತ್ತು ಸುಧಾ. ಕೆ.ಎಂ ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ರೇಂಕ್ ಗಳಿಸಿದ್ದಾರೆ. ಪ್ರಥಮ ಮೂರು ರೇಂಕ್‌ಗಳನ್ನು ನಾಲ್ಕು ಮಂದಿ ಹಂಚಿಕೊಂಡಿದ್ದು ಈ ನಾಲ್ವರಲ್ಲಿ ಮೂರು ಮಂದಿ ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವುದು ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸಂಭ್ರಮದ ಕಡಲಲ್ಲಿ ತೇಲಿಸಿದೆ. ಇದರ ಹೊರತಾಗಿ ಇತ್ತೀಚೆಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ಆನ್ವಯಿಕ ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟವಾಗಿದ್ದು ಇದರ ಪ್ರಥಮ ರೇಂಕ್ ಕೂಡಾ ಈ ಶಾಲೆಯ ಹಳೆವಿದ್ಯಾರ್ಥಿನಿ ಕಾಕುಂಜೆ ಹೇಮಶ್ರೀಗೆ ಲಭಿಸಿದೆ. ಈಕೆ ಶಾಸ್ತ್ರೀಯ ಸಂಗೀತದಲ್ಲೂ ಭರವಸೆಯ ಕಲಾವಿದೆಯಾಗಿದ್ದು, ಶತಮಾನೋತ್ಸವದ ವೇದಿಕೆಯಲ್ಲಿ 22.12.2013 ಭಾನುವಾರ 12 ಗಂಟೆಗೆ ಸಹೋದರಿ ಶ್ರೀವಾಣಿ ಕಾಕುಂಜೆಯೊಂದಿಗೆ ಶಾಸ್ತ್ರೀಯ ಸಂಗೀತ ಕಚೇರಿ ನೀಡಲಿದ್ದಾಳೆ. ಶತಮಾನೋತ್ಸವದ ಸಡಗರದ ನಡುವೆ ಹಳೆ ವಿದ್ಯಾರ್ಥಿಗಳು ಗಳಿಸಿದ ಈ ಗೌರವಗಳು ಕಾರ್ಯಕ್ರಮದ ಘನತೆಯನ್ನು ಎತ್ತರಕ್ಕೇರಿಸಿದೆ.

ಶಾಲಾ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು ಒಂದು ಸಾವಿರ ಮಂದಿ ಆಸೀನರಾಗಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. 20.12.2013 ಶುಕ್ರವಾರ ಅಪರಾಹ್ನ 4 ಗಂಟೆಗೆ ಜರಗುವ ಉದ್ಘಾಟನಾ ಕಾರ್ಯಕ್ರಮವನ್ನು ಮತ್ತು 22.12.2013 ಅಪರಾಹ್ನ 4 ಗಂಟೆಗೆ ಜರಗುವ ಸಮಾರೋಪ ಸಮಾರಂಭವನ್ನುhttp://mahajanaschools.com/ ಮತ್ತು http://www.oppanna.com/ ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ವಿದ್ಯಾಭಿಮಾನಿಗಳಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಚಪ್ಪರ ಸಿದ್ಧಪಡಿಸಲಾಗಿದೆ. ವಸ್ತು ಪ್ರದರ್ಶನ ಮಳಿಗೆಯ ಸಿದ್ಧತೆ ಭರದಿಂದ ಸಾಗುತ್ತಿದ್ದು ಹಳೆಯ ಗ್ರಾಮ್ಯ ಪರಿಕರಗಳು, ಕರಕುಶಲ ಉತ್ಪನ್ನಗಳನ್ನು, ಚಿತ್ರಗಳನ್ನು ಇರಿಸಲಾಗಿದೆ. 

ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶಾಲಾ ಶಿಕ್ಷಕರು ಮತ್ತು ಹಳೆವಿದ್ಯಾರ್ಥಿಗಳಿಂದ ಜರಗುವ ಯಕ್ಷಗಾನ ಬಯಲಾಟವನ್ನು ಬೆಳಗ್ಗಿನ ತನಕ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ‘ಕಾರ್ತವೀರ್ಯಾರ್ಜುನ ಕಾಳಗ’ ಮತ್ತು ‘ಶ್ರೀ ಏಕಾದಶೀ ದೇವಿ ಮಹಾತ್ಮೆ’ ಕಥಾನಕಗಳು ಪ್ರಸ್ತುತಿಗೊಳ್ಳಲಿವೆ.

No comments:

Post a Comment