Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

20 December 2013

“ಮಂಗಳಯಾನದ ಹಿಂದೆ ಸಂಸ್ಕೃತದ ಹಿನ್ನೆಲೆಯಿದೆ: ಡಾ|ಕೆ.ರಾಧಾಕೃಷ್ಣನ್''




ಭಾರತದ ಭಾಷಾ ವೈವಿಧ್ಯವನ್ನು ಅರ್ಥಮಾಡಿ ಚೆನ್ನಾಗಿ ತಿಳಿದುಕೊಳ್ಳಲು ದೇವಭಾಷೆ ಸಂಸ್ಕೃತದ ಕಲಿಕೆ ಅಗತ್ಯ. ಅಂತಹ ಸಂಸ್ಕೃತದ ಮಹಾಕಾವ್ಯಗಳಲ್ಲಿ ತಿಳಿಸಿದ ಅಂಶಗಳನ್ನು ಸಾಕಾರಗೊಳಿಸಲು ನಮ್ಮ ಸಂಸ್ಥೆ ಇಸ್ರೋ ಪ್ರಯತ್ನಿಸುತ್ತಿದೆ. ಮಂಗಳಯಾನ ಅಂತಹ ಒಂದು ಮಹತ್ವದ ಘಟ್ಟ. ಮಂಗಳಯಾನದ ಹೆಜ್ಜೆಯನ್ನು ಕೈಗೊಳ್ಳುವುದರೊಂದಿಗೆ ನಾವು ಜಗತ್ತಿನ ನಾಲ್ಕನೆಯ ದೇಶವಾಗಿ ಬೆಳೆದಿದ್ದೇವೆ. ಈ ಪ್ರಯತ್ನ ಪೂರ್ಣ ಯಶಸ್ಸು ಗಳಿಸಿದರೆ ನಾವು ಪ್ರಪ್ರಥಮ ರಾಷ್ಟ್ರವೆಂಬ ಗೌರವಕ್ಕೆ ಪಾತ್ರರಾಗಲಿದ್ದೇವೆ, ಆ ಮೂಲಕ ನಾವು ಎಲ್ಲರಿಗೂ ಮಾದರಿಯಾಗಲಿದ್ದೇವೆ. ಶಾಲೆಗಳು ನಮಗೆಲ್ಲ ಜ್ಞಾನಾರ್ಜನೆಯ ಹಂತಗಳನ್ನು ಕಲಿಸುತ್ತವೆ. ಅವುಗಳ ತತ್ವವನ್ನು ಅಳವಡಿಸಿಕೊಂಡು ನಾವು ಪ್ರಗತಿಶೀಲರಾಗಬೇಕು. ನಮ್ಮೆಲ್ಲರ ಬೆಳವಣಿಗೆಗೆ ಸಂಸ್ಕೃತದ ಆಧಾರವಿದೆ, ಭಾರತದ ಸಾಂಪ್ರದಾಯಿಕ ಇತಿಹಾಸದ ಬೆನ್ನೆಲುಬು ಇದೆ. ಸಂಸ್ಥೆಯ ಬೆಳವಣಿಗೆಯ ಹಿಂದೆ ಅದರ ಸ್ಥಾಪಕರ ಅದ್ಭುತ ಕಲ್ಪನೆ ಇದೆ. ಈ ಕಲ್ಪನೆ ಸಾಕಾರಗೊಂಡಾಗ ಮೇಧಾವಿಗಳಾದ ಸಹಸ್ರಾರು ಮಂದಿ ನಾಡಿಗೆ ಕೊಡುಗೆಯಾಗಿ ದೊರೆಯುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಬೆಳೆದು ಅವರೆಲ್ಲರೂ ತಮ್ಮ ಸೇವೆಯು ನಾಡಿನ ಪ್ರಗತಿಗೆ ನೆರವಾಗುವಂತಹ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲಿ.” ಎಂದು ಇಸ್ರೋ ಅಧ್ಯಕ್ಷ ಡಾ| ಕೆ.ರಾಧಾಕೃಷ್ಣನ್ ಅಭಿಪ್ರಾಯಪಟ್ಟರು. ಅವರು 20.12.2013 ಶುಕ್ರವಾರ ಅಪರಾಹ್ಣ 4 ಗಂಟೆಗೆ ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ನಿರ್ಮಿಸಿದ ’ಶತಮಾನೋತ್ಸವ ಸೌಧ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು “ಸಂಸ್ಕೃತದ ಹೆಸರಿನಿಂದಲೇ ಗುರುತಿಸಲ್ಪಡುವ ಈ ಸಂಸ್ಥೆ ನಾಡಿನಾದ್ಯಂತ ಗೌರವಿಸಲ್ಪಡುತ್ತಿದೆ. ಖಂಡಿಗೆ ಶಾಮ ಭಟ್ಟರ ಶಿಸ್ತು, ಪ್ರಯತ್ನ ಈ ಶಾಲೆಯ ಬೆಳವಣಿಗೆಯ ಹಿಂದೆ ಪ್ರಧಾನ ಪಾತ್ರ ವಹಿಸಿದೆ. ಶಾಲೆ ಇನ್ನಷ್ಟು ಬೆಳಗಲಿ ಎಂದು ಅನುಗ್ರಹಿಸಿದರು.

ಚೆನ್ನೈಯ ಅಪಲೋ ಹೋಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿ. ನ ಆಡಳಿತ ನಿರ್ದೇಶಕಿ ಶ್ರೀಮತಿ ಪ್ರೀತಾ ರೆಡ್ಡಿ ಅಧ್ಯಕ್ಷತೆ ವಹಿಸಿದರು. ಕೊಯಂಬತ್ತೂರು ಆರ್ಯವೈದ್ಯ ಫಾರ್ಮಸಿಯ ಆಡಳಿತ ನಿರ್ದೇಶಕ, ‘ಪದ್ಮಶ್ರೀ’ ಪ್ರಶಸ್ತಿ ವಿಜೇತ ಕೆ. ಕೃಷ್ಣಕುಮಾರ್, ಕೇರಳ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಂ. ಶರೀಫ್, ಇಸ್ರೋ ವಿಜ್ಞಾನಿ ಡಾ|ಗಣೇಶ್ ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ, ಪ್ರಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ, ಇರಿಂಞಾಲಕುಡ ಇವರನ್ನು ಗೌರವಿಸಲಾಯಿತು. ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಸ್ವಾಗತಿಸಿದರು. ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ ವಂದಿಸಿದರು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.

No comments:

Post a Comment