Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

21 November 2018

ಸಂಸ್ಕೃತ ಕಥಾರಚನೆಯಲ್ಲಿ ರಾಜ್ಯ ಮಟ್ಟಕ್ಕೆ


ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಪ್ರೌಢಶಾಲಾ ವಿಭಾಗದ ಸಂಸ್ಕೃತ ಕಥಾರಚನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ  ತರಗತಿ ವಿದ್ಯಾರ್ಥಿನಿ ಆಶಾ.ಕೆ ಭಾಗವಹಿಸಿ 'ಎ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಕಿಳಿಂಗಾರು ನಿವಾಸಿ ಪ್ರಕಾಶ ಭಟ್ ಮತ್ತು ಸವಿತಾ.ಕೆ ಇವರ ಪುತ್ರಿ. ಅಭಿನಂದನೆಗಳು...

19 November 2018

ವೃತ್ತಿ ಪರಿಚಯ ಮೇಳ_ಬಹುಮಾನ


ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಅಗಲ್ಪಾಡಿಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟ ಮತ್ತು ಚೆಮ್ನಾಡಿನಲ್ಲಿ ಜರಗಿದ ಜಿಲ್ಲಾ ಮಟ್ಟದ ವೃತ್ತಿ ಪರಿಚಯ, ವಿಜ್ಞಾನ ಮತ್ತು ಐ.ಟಿ ಮೇಳಗಳಲ್ಲಿ ಬಾಗವಹಿಸಿ ಬಹುಮಾನ ಪಡೆದಿದ್ದಾರೆ. ಇಲೆಕ್ಟ್ರಿಕಲ್ ವಯರಿಂಗ್ ವಿಭಾಗದಲ್ಲಿ ಒಂಬತ್ತನೇ ತರಗತಿಯ ಕೃಷ್ಣಪ್ರಸಾದ್ ಮತ್ತು ಬಲೆ ಹೆಣೆಯುವ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಪ್ರಶಾಂತ್.ವಿ ಇವರು ‘ಎ’ ಗ್ರೇಡ್ ಪಡೆದು ಕಣ್ಣೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು...

05 November 2018

ಶಾಲಾ ಕಲೋತ್ಸವ_ಚಾಂಪಿಯನ್


ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಅಭಿನಂದನೆಗಳು...

15 September 2018

ಹಿಂದಿ ದಿನಾಚರಣೆಯಲ್ಲಿ ಬಹುಮಾನ


ವರಲಕ್ಷ್ಮಿ. ಎನ್
ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ಹಿಂದಿ ದಿನಾಚರಣೆಯ ಅಂಗವಾಗಿ ಜರಗಿದ ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವರಲಕ್ಷ್ಮಿ. ಎನ್. ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಶಂಕರಪ್ರಸಾದ ನಾಯ್ಕಾಪು ಮತ್ತು ಪದ್ಮಿನಿ ಇವರ ಪುತ್ರಿ.

ಸುದರ್ಶನ. ಕೆ
ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ಹಿಂದಿ ದಿನಾಚರಣೆಯ ಅಂಗವಾಗಿ ಜರಗಿದ ಹಿರಿಯ ಪ್ರಾಥಮಿಕ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಸುದರ್ಶನ.ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತ ಕುಂದಕಟ್ಟದ ಗಣೇಶ್ ಮತ್ತು ಸತ್ಯಶ್ರೀ ಇವರ ಪುತ್ರ.

10 September 2018

‘ಮಕ್ಕಳ ಧ್ವನಿ’ಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ

ಉಡುಪಿ, ಕಾಸರಗೋಡು ಜಿಲ್ಲೆಯ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ ಸೆಪ್ಟೆಂಬರ್ 8 ಮತ್ತು 9 ರಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ 25ನೇ ವರ್ಷದ ‘ಮಕ್ಕಳ ಧ್ವನಿ’ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದ ಅಂಗವಾಗಿ ಜರಗಿದ ಕಥಾಗೋಷ್ಠಿಯಲ್ಲಿ ಶಾಲಾ ವಿದ್ಯಾರ್ಥಿಗಳಾದ ಅಚಲ.ಪಿ, ಚಿನ್ಮಯಿ ಭಾರದ್ವಾಜ್, ಅನುಪ್ರಿಯ, ಆಶ.ಕೆ ಮತ್ತು ಕವಿಗೋಷ್ಠಿಯಲ್ಲಿ ವೈಷ್ಣವಿ ಕೆ.ಎಸ್. ಹಾಗೂ ವರಲಕ್ಷ್ಮಿ ಎನ್. ಭಾಗವಹಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

18 August 2018

ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ


ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಸ್ವೀಕರಿಸಿದರು.

ಈ ಮೊತ್ತದಿಂದ ಖರೀದಿಸಲಾದ 50 ಕಿಲೋಗ್ರಾಂ ಅಕ್ಕಿ, 10 ಕಿಲೋಗ್ರಾಂ ಅವಲಕ್ಕಿ, 10 ಕಿಲೋಗ್ರಾಂ ಸಜ್ಜಿಗೆ,10 ಕಿಲೋಗ್ರಾಂ ಹಸರು ಬೇಳೆ, 15 ಕಿಲೋಗ್ರಾಂ ಸಕ್ಕರೆ, 10 ಕಿಲೋಗ್ರಾಂ ಕಡಲೆ, 10 ಕಿಲೋಗ್ರಾಂ ತೊಗರಿ ಬೇಳೆ, 4 ಕಿಲೋಗ್ರಾಂ ಚಾಹುಡಿ, 5 ಟೂಥ್ ಪೇಸ್ಟ್, ಇವುಗಳನ್ನು ಸ್ಕೌಟ್ ಗೈಡ್ ಜಿಲ್ಲಾ ಸಮಿತಿಯ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು. ನಮ್ಮ ಜೊತೆ ಕೈಜೋಡಿಸಿದವರಿಗೆ ಕೃತಜ್ಞತೆಗಳು...

02 August 2018

‘ಮಹಾಜನ ವಾಣಿ’ ಬಾನುಲಿ ಕೇಂದ್ರಕ್ಕೆ ಚಾಲನೆ



“ವಿದ್ಯಾರ್ಜನೆಯ ಹಂತದಲ್ಲಿಯೇ ಮಕ್ಕಳಿಗೆ ಭವಿಷ್ಯದ ಕಡೆಗೆ ಸ್ಪಷ್ಟವಾದ ಗುರಿ ಇರಬೇಕು. ಅದನ್ನು ಸಾಧಿಸುವ ಛಲವೂ ಬದ್ಧತೆಯೂ ಇರಬೇಕು. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡರೆ ಜೀವನದಲ್ಲಿ ಸಾಧನೆಯ ಹೆಜ್ಜೆಗಳನ್ನು ಇಡಲು ಸಹಕಾರಿಯಾಗಬಹುದು. ಒಂದು ಕಾಲದಲ್ಲಿ ನಾಡಿನಾದ್ಯಂತ ಮಾಹಿತಿ ವಿನಿಮಯದ ಏಕೈಕ ಮಾಧ್ಯಮವಾಗಿದ್ದ ರೇಡಿಯೋ ಪ್ರಸ್ತುತ ಹೊಸರೂಪದಲ್ಲಿ ಪ್ರಸ್ತುತಿಗೊಳ್ಳುತ್ತಾ ನಗರ ಗ್ರಾಮೀಣ ಜನರಿಗೆ ಮನರಂಜನೆ ನೀಡುತ್ತಿದೆ. ಅಂತಹ ವ್ಯವಸ್ಥೆಯನ್ನು ತಮ್ಮ ಪರಿಧಿಯೊಳಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು” ಮಂಗಳೂರು ಆಕಾಶವಾಣಿ ಕೇಂದ್ರದ ಉಪನಿರ್ದೇಶಕಿ ಡಾ|ಮಾಲತಿ ಆರ್. ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಮಹಾಜನ ವಾಣಿ’ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ ಪಿ.ಎಸ್ ಶುಭಹಾರೈಸಿದರು. ವಿದ್ಯಾರ್ಥಿನಿ ಶರಣ್ಯ.ಪಿ.ಜೆ ಪ್ರಾಸ್ತಾವಿಕ ಮಾತನ್ನಾಡಿದಳು. ವಿದ್ಯಾರ್ಥಿಗಳಾದ ಸಂಪತ್.ಕೆ ಸ್ವಾಗತಿಸಿ ವಿಲ್ಸನ್ ಶರುಣ್ ಕ್ರಾಸ್ತಾ ವಂದಿಸಿದರು. ವರಲಕ್ಷ್ಮಿ.ಎನ್ ಕಾರ್ಯಕ್ರಮ ನಿರೂಪಿಸಿದಳು.

27 July 2018

ಪ್ರಾಚೀನ ವಸ್ತು ಪ್ರದರ್ಶನ


ನಮ್ಮ ಶಾಲೆಗೆ ಹೊಸತಾಗಿ ಕಾಲಿರಿಸಿದ ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆ ಗಮನ ನೀಡಿ ಅದನ್ನು ಅಕ್ಕರೆಯಿಂದ ಶಾಲೆಗೆ ಹೊತ್ತು ತಂದು ತರಗತಿಯಲ್ಲಿ ಪ್ರದರ್ಶಿಸಿ ಸಂತಸ ಪಟ್ಟರುಆಧುನಿಕ ಉಪಕರಣಗಳ ಉಪಯೋಗವೇ ಅಧಿಕವಾಗಿರುವ ಕಾಲದಲ್ಲಿ ಹಳೆಯ ಕಾಲದ ನಾಣ್ಯ, ಅಳತೆ ಪಾತ್ರೆಗಳುದೀಪ, ಮರದ ಪಾದುಕೆಗಿಂಡಿ, ಸ್ಟ್ಯಾಂಪ್ಮಡಕೆ ಮುಂತಾದವುಗಳು ಮಕ್ಕಳಲ್ಲಿ ಕುತೂಹಲವನ್ನು ಹೆಚ್ಚಿಸಿದವು. ಶಿಕ್ಷಕಿ ಜ್ಯೋತಿಲಕ್ಷ್ಮಿ.ಯಸ್ ಇವರ ನೇತೃತ್ವದಲ್ಲಿ ನಡೆದ ವಸ್ತುಪ್ರದರ್ಶನ ಮಕ್ಕಳಲ್ಲಿ ಬಹಳ ಕಾಲ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿತ್ತು.

24 July 2018

ಶಾಲಾ ತರಕಾರಿ ತೋಟಕ್ಕೆ ಕೃಷಿಭವನದ ಅಧಿಕಾರಿಗಳಿಂದ ಭೇಟಿ



ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕ ಕೋರಿಕ್ಕಾರು ಗೋವಿಂದ ಶರ್ಮರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ನಿರ್ಮಿಸಿರುವ  ಶಾಲಾ ತರಕಾರಿ ತೋಟಕ್ಕೆ ಬದಿಯಡ್ಕ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿಗಳಾದ ಉಣ್ಣಿ ಕೃಷ್ಣನ್ ಮತ್ತು ರಾಧಾಕೃಷ್ಣನ್ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳಿಗೆ ಬಾಧಿಸುವ ರೋಗಗಳ ಬಗ್ಗೆ ಮತ್ತು ಅದನ್ನು ನಿವಾರಿಸುವ ಕುರಿತಾಗಿ ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಾಣಿ ಪಿ ಯಸ್,  ಅವಿನಾಶ ಕಾರಂತ.ಯಂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ.ಯಚ್ ಸ್ವಾಗತಿಸಿ ಶಿಕ್ಷಕರಾದ ಕೃಷ್ಣಪ್ರಸಾದ.ಟಿ ವಂದಿಸಿದರು.


21 July 2018

ಚಾಂದ್ರ ದಿನ 2018

ಇಂದು ನಮ್ಮ ಶಾಲೆಯಲ್ಲಿ ಚಾಂದ್ರ ದಿನಾಚರಣೆಯ ಸಂಭ್ರಮ. ಸಮಾಜ ವಿಜ್ಞಾನ ಶಿಕ್ಷಕ ಕೃಷ್ಣಪ್ರಸಾದ್.ಟಿ ಇವರ ಸಲಹೆಯಂತೆ ಎಂಟನೇ ತರಗತಿ ವಿದ್ಯಾರ್ಥಿಗಳು ತಯಾರಿಸಿದ ರೋಕೆಟ್‍ಗಳ ಆಕರ್ಷಕ ಮಾದರಿಗಳ ಪ್ರದರ್ಶನ, ವೀಡಿಯೋ ಪ್ರದರ್ಶನ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಜರಗಿದವು.

20 July 2018

ಚುನಾವಣೆ 2018

ಶಾಲಾ ವಿದ್ಯಾರ್ಥಿ ಮಂಡಳಿಗೆ ನಾಯಕರ ಆಯ್ಕೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ವಿಧಾನದಂತೆಯೇ ಇಂದು ಜರಗಿತು. ಮೂರು ವಿವಿಧ ಕೇಂದ್ರಗಳಲ್ಲಿ ಇರಿಸಲಾದ ಮತಪೆಟ್ಟಿಗೆಗಳಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಮತದಾನದ ಕೊನೆಗೆ ಮತ ಎಣಿಕೆ ನಡೆದು ಶಾಲಾ ವಿದ್ಯಾರ್ಥಿ ನಾಯಕನಾಗಿ ಕೃಷ್ಣಪ್ರಸಾದ್, ಉಪ ನಾಯಕಿಯಾಗಿ ಅದಿತಿ.ಕೆ ಮತ್ತು ಗಾಯತ್ರಿ ಭಿತ್ತಿ ಪತ್ರಿಕೆಯ ಸಂಚಾಲಕನಾಗಿ ಲಿಖಿತ್ ಇವರನ್ನು ವಿಜಯಿಗಳೆಂದು ಘೋಷಿಸಲಾಯಿತು. ವಿಜೇತರಿಗೆ ಶುಭಾಶಯಗಳು...

18 July 2018

ಏಳನೇ ತರಗತಿ ವಿದ್ಯಾರ್ಥಿಗಳಿಂದ CPCRI ಗೆ ಭೇಟಿ


ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮತ್ತು ನವೀನ ತಂತ್ರಜ್ಞಾನಗಳನ್ನು ಬಳಸಿ ಕೃಷಿ ವ್ಯವಸ್ಥೆಗಳನ್ನು ಹೆಚ್ಚು ಆಪ್ಯಾಯಮಾನಗೊಳಿಸುವ ನಿಟ್ಟಿನಲ್ಲಿ ಪರಿಚಯಾತ್ಮಕ ಸಂದರ್ಶನ ಚಟುವಟಿಕೆಗಳು ಅಗತ್ಯ ಎನ್ನುವುದನ್ನು ಗಮನದಲ್ಲಿರಿಸಿ ಶಾಲೆಗಳಲ್ಲಿ ಕೃಷಿ ಸಂದರ್ಶನ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಇಂದು ಸಿ.ಪಿ.ಸಿ.ಆರ್.ಐ ಕಾಸರಗೋಡನ್ನು ಸಂದರ್ಶಿಸಿದರು.

ಸಿ.ಪಿ.ಸಿ.ಆರ್.ಐ ಯ ಹಿರಿಯ ತಾಂತ್ರಿಕ ಅಧಿಕಾರಿ  ಮುರಳೀಕೃಷ್ಣ ಕಿಳಿಂಗಾರು ವಿದ್ಯಾರ್ಥಿಗಳಿಗೆ ಟಿಶ್ಯೂ ಕಲ್ಚರ್ ಕುರಿತು ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಮಣಿಕಂಠನ್ ಕಸಿಕಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಟಿಶ್ಯೂ ಕಲ್ಚರ್ ಮತ್ತು ಕಸಿಕಟ್ಟುವಿಕೆಯ ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಂಡರು. ಸಮರ್ಪಕ ಅರಿವಿನೊಂದಿಗೆ ಕೃಷಿ ವಿಭಾಗದ ಗಣನೀಯ ಸಾಧನೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಸಂದರ್ಭ ಭರವಸೆಯ ನುಡಿಗಳನ್ನಾಡಿದರು. ಶಾಲಾ ಶಿಕ್ಷಕರಾದ ಗೋವಿಂದ ಶರ್ಮ.ಕೆ, ಜ್ಯೋತಿಲಕ್ಷ್ಮಿ.ಯಸ್, ಅವಿನಾಶ ಕಾರಂತ.ಯಂ, ಶೋಭಾ.ಕೆ.ಹಿರೇಮಠ್ ಮೊದಲಾದವರು ನೇತೃತ್ವ ನೀಡಿದರು.

13 July 2018

ರಸ್ತೆ ಸುರಕ್ಷಾ ತರಬೇತಿ

ನಮ್ಮ ಶಾಲೆಯ ರಸ್ತೆ ಸುರಕ್ಷಾ ಕ್ಲಬ್ ನೇತೃತ್ವದಲ್ಲಿ ಇಂದು ರಸ್ತೆ ಜಾಗೃತಿಯ ಬಗ್ಗೆ ತಿಳುವಳಿಕಾ ತರಬೇತಿ ಜರಗಿತು. ಕಾಸರಗೋಡು ಆರ್.ಟಿ.ಒ ಕಛೇರಿಯ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್ ವಿಜಯನ್ ವೆಳ್ಳರಿಕುಂಡು ಇಂದು ಆಗಮಿಸಿ ಸ್ಲೈಡ್ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ದಾಟುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಅಧ್ಯಕ್ಷತೆ ವಹಿಸಿದರು.

11 July 2018

ವಿಶ್ವ ಜನಸಂಖ್ಯಾ ದಿನ

ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಸಮಾಜ ವಿಜ್ಞಾನ ಕ್ಲಬ್ ನ ವತಿಯಿಂದ ಹೈಸ್ಕೂಲ್ ವಿಭಾಗದ ಭಾಷಣ ಸ್ಪರ್ಧೆ ನಮ್ಮ ಶಾಲೆಯಲ್ಲಿ ಇಂದು ಜರಗಿತು. ತೀರ್ಪುಗಾರರಾಗಿ ವಾಣಿ.ಪಿ.ಯಸ್, ಶೈಲಜಾ ಬಿ, ವಿಶ್ವನಾಥ ಭಟ್ ಮತ್ತು ಕೃಷ್ಣಪ್ರಸಾದ ತಲೆಂಗಳ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಯು.ಪಿ ವಿಭಾಗದ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯೂ ಜರಗಿತು.


09 July 2018

ಸಿದ್ಧವಾಗುತ್ತಿದೆ ಇಕೋ ಗಾರ್ಡನ್

ಶಾಲೆಯ ಇಕೋ ಕ್ಲಬ್ ಸುಂದರವಾದ ‘ಕೈತೋಟ’ ತಯಾರಿಯಲ್ಲಿ ನಿರತವಾಗಿದೆ. ವಿದ್ಯಾರ್ಥಿ ಸದನದ ಹಿಂಭಾಗದಲ್ಲಿ ನೆಲವನ್ನು ಹಸನುಗೊಳಿಸಲಾಗಿದೆ. ಚಿತ್ರಕಲಾ ಶಿಕ್ಷಕ ಕೋರಿಕ್ಕಾರು ಗೋವಿಂದ ಶರ್ಮರ ನೇತೃತ್ವದಲ್ಲಿ ಇಕೋ ಕ್ಲಬ್ ಸದಸ್ಯರು ತರಕಾರಿ ಬೀಜಗಳನ್ನು ಬಿತ್ತಿದ್ದಾರೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇವೆ...

06 July 2018

ಬತ್ತದ ಗದ್ದೆಗೆ ಭೇಟಿ

ಯುವ ಜನಾಂಗವು ಕೃಷಿಯ ಕಡೆಗೆ ಗಮನ ಹರಿಸಲು ಅನುಕೂಲವಾಗಲಿ ಎಂಬ ಸದಾಶಯದೊಂದಿಗೆ ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಗೋವಿಂದ ಶರ್ಮ ಕೋರಿಕ್ಕಾರುನಂದಕುಮಾರ್ಅವಿನಾಶ ಕಾರಂತ ಪಾಡಿಶ್ರೀಮತಿ ಮಾಲತಿಶ್ರೀಮತಿ ಜ್ಯೋತಿಲಕ್ಷ್ಮಿಶ್ರೀಮತಿ ಪೂರ್ಣಿಮಾ, ಶ್ರೀಮತಿ ರೋಹಿಣಿ ಮತ್ತು ಶಿಕ್ಷಕ ತರಬೇತಿ ಪಡೆಯುತ್ತಿರುವ ಕುಮಾರಿ ಹೇಮಲತಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸ್ಕೌಟ್ ಉದ್ಘಾಟನೆ

ಪ್ರಸಕ್ತ ವರ್ಷದ ಸ್ಕೌಟ್ ಮತ್ತು ಗೈಡ್ ದಳದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇಂದು ಜರಗಿತು. ನಮ್ಮ ಶಾಲೆಯಲ್ಲಿ ಸುದೀರ್ಘ ಕಾಲ ಸ್ಕೌಟ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ ಎಚ್.ಸೂರ್ಯನಾರಾಯಣ ಇವರು ದೀಪ ಪ್ರಜ್ವಾಲನೆ ಮಾಡುವ ಮೂಲಕ ಸ್ಕೌಟ್ ಮತ್ತು ಗೈಡ್ ತರಬೇತಿಗೆ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ.ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಸ್ಕೌಟ್ ಶಿಕ್ಷಕ ಶಿವರಂಜನ್. ಪಿ, ಗೈಡ್ ಶಿಕ್ಷಕಿಯರಾದ ವಾಣಿ.ಪಿ.ಎಸ್ ಮತ್ತು ಅನ್ನಪೂರ್ಣ.ಎಸ್ ಉಪಸ್ಥಿತರಿದ್ದರು. 

05 July 2018

ವಿವಿಧ ಸಂಘಗಳ ಉದ್ಘಾಟನೆ

ನಮ್ಮ ಶಾಲೆಯಲ್ಲಿರುವ ವಿವಿಧ ವಿದ್ಯಾರ್ಥಿ ಸಂಘಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಇಂದು ಮಧ್ಯಾಹ್ನ ಜರಗಿತು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ವಿವಿಧ ಸಂಘಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ವಿವಿಧ ಕ್ಲಬ್ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವಿಕಾಸಗೊಳಿಸಬೇಕು ಎಂದು ಹೇಳಿದರು. ಶಾಲಾ ಹಿರಿಯ ಶಿಕ್ಷಕಿ ಕೆ.ವಿನೋದಿನಿ ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಉತ್ತೇಶ್ ಕುಮಾರ್.ಟಿ ಸ್ವಾಗತಿಸಿ, ಆಶಾ.ಕೆ ವಂದಿಸಿದರು. ಅದಿತಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದಳು.

01 July 2018

ಶಾಲೆಯ ಮುಂದೆ ಸುಂದರ ಗಾರ್ಡನ್

ನಮ್ಮ ಶಾಲೆಯ ಮುಂದೆ ಬದಿಯಡ್ಕದಿಂದ ಕುಂಬಳೆಗೆ ಸಾಗುವ ರಸ್ತೆಯ ಬದಿಯಲ್ಲಿಯೇ ಆಕರ್ಷಕ ಗಾರ್ಡನ್ ಸಿದ್ಧವಾಗಿದೆ. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ವಿಶೇಷ ಆಸ್ಥೆ ವಹಿಸಿ ಈ ಹೂದೋಟದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಒಂದು ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರ ಕಣ್ಮನಗಳನ್ನು ಸೆಳೆಯುತ್ತಿದೆ. ಈ ಹೋದೋಟ ನಿರ್ಮಾಣ ಪ್ರಕ್ರಿಯೆಯಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು...

25 June 2018

ಬಳ್ಳಪದವು ಶಂಕರನಾರಾಯಣ ಭಟ್ಟರಿಂದ ಕೊಡುಗೆ


ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರಿಗೆ ನಮ್ಮ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ಇಳಿವಯಸ್ಸಿನಲ್ಲಿಯೂ ಶಾಲೆಯ ಮೇಲಿನ ಅಭಿಮಾನದಿಂದ ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಅನುಕೂಲವಾಗುವಂತೆ ಹೊಸ ಪಾತ್ರೆ ಮತ್ತು ಪರಿಕರಗಳನ್ನು ತೆಗೆದಿಟ್ಟು ನಮ್ಮನ್ನು ಕರೆದಿದ್ದಾರೆ, ಇಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಎಚ್ ವೆಂಕಟರಾಜರು ಅವುಗಳನ್ನು ಸ್ವೀಕರಿಸಿದರು. ಜೊತೆಯಲ್ಲಿ ಅಧ್ಯಾಪಕರಾದ ಬಿ.ಸುಬ್ರಹ್ಮಣ್ಯ, ಶಿಕ್ಷಕಿ ವಾಣಿ.ಪಿ.ಎಸ್ ಮತ್ತು ಶೈಲಜಾ.ಬಿ ಉಪಸ್ಥಿತರಿದ್ದರು. ಬಳ್ಳಪದವು ಶಂಕರನಾರಾಯಣ ಭಟ್ಟರಿಗೂ ಅವರ ಧರ್ಮಪತ್ನಿಯವರಿಗೂ ಧನ್ಯವಾದಗಳು...

21 June 2018

ಯೋಗ ದಿನಾಚರಣೆ

ಪತಂಜಲಿ ಯೋಗ ವಿದ್ಯಾಪೀಠದ ಆಶ್ರಯದಲ್ಲಿ ಕಳೆದ ಹದಿನೈದು ದಿನಗಳಿಂದ ನಮ್ಮ ಶಾಲೆಯಲ್ಲಿ ಯೋಗ ತರಬೇತಿ ಜರಗುತ್ತಿದ್ದು ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಳಗ್ಗೆ ಸಭಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕಾಸರಗೋಡು ಜಿಲ್ಲಾಧಿಕಾರಿಗಳಾದ ಕೆ.ಜೀವನ್ ಬಾಬು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರಗಿತು.


05 June 2018

ವಿಶ್ವ ಪರಿಸರ ದಿನಾಚರಣೆ


ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಗ್ರಾಮ ಪಂಚಾಯತು ಮಟ್ಟದ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಪರಿಸರದಲ್ಲಿ ಗಿಡವನ್ನು ನೆಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಸದಸ್ಯರು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಉಪಸ್ಥಿತರಿದ್ದರು.

ಸಾಯಂಕಾಲ ಜರಗಿದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹಿರಿಯ ಶಿಕ್ಷಕಿ ವಿನೋದಿನಿ.ಕೆ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಶಾಲಾ ಶಿಕ್ಷಕಿ ಶೈಲಜಾ.ಬಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪ್ರೌಢಶಾಲಾ ವಿಭಾಗದ ಶಿಕ್ಷಕ ಕೃಷ್ಣಪ್ರಸಾದ.ಟಿ ಕಾರ್ಯಕ್ರಮ ನಿರೂಪಿಸಿದರು

01 June 2018

ಶಾಲಾ ಪ್ರವೇಶೋತ್ಸವ



ಹೊಸ ಕನಸುಗಳನ್ನು ಕಟ್ಟಿಕೊಂಡು ವಿದ್ಯಾರ್ಥಿಗಳು ಶಾಲೆಯ ಮೆಟ್ಟಿಲನ್ನು ಏರುತ್ತಿದ್ದಾರೆ, ನಿನ್ನೆಯೇ ನಾವು ವಿದ್ಯಾರ್ಥಿಗಳನ್ನು ಸ್ವಾಗತಿಸುವುದಕ್ಕಾಗಿ ನಮ್ಮ ಶಾಲೆಯನ್ನು ಸಿಂಗರಿಸಿದ್ದೇವೆ. ಹೊಸದಾಗಿ ಸೇರಿದ ವಿದ್ಯಾರ್ಥಿಗಳ ಮೆರವಣಿಗೆಯೊಂದಿಗೆ ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವವು ಇಂದು ಜರಗಿತು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಎಸ್.ನಾರಾಯಣ ಮತ್ತು ಇತರ ಸದಸ್ಯರು ಅಧ್ಯಾಪಕರೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು. ನೂತನ ಶೈಕ್ಷಣಿಕ ವರ್ಷಕ್ಕೆ ಮಹಾಜನದ ಶುಭಾಶಯಗಳು...

31 May 2018

ಕಾರ್ತಿಕ್ ಕೆ.ಎಸ್ - ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ


2017-18 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ  ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕಾರ್ತಿಕ್.ಕೆ.ಎಸ್ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾನೆ. ಈತ ಕಿಳಿಂಗಾರು ಬಳಿಯ ಕೊಡ್ವಕರೆ ನಿವಾಸಿ ಸತ್ಯಶಂಕರ.ಕೆ ಮತ್ತು ಶಶಿಕಲಾ.ಎಸ್ ದಂಪತಿಯ ಪುತ್ರ. ಶುಭ ಹಾರೈಕೆಗಳು...

03 May 2018

ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

2017-18ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಶಾಲೆಯ 12 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಂಕಿತ.ಡಿ, ಭೂಮಿಕಾ.ಕೆ, ಚಿನ್ಮಯ.ಕೆ, ದೀಕ್ಷಿತ.ಕೆ, ಮೇಘಶ್ರೀ.ಎಂ, ನವೀನ್.ಟಿ, ಸೀತಾಲಕ್ಷ್ಮಿ.ಎಸ್, ಶರ್ವಾಣಿ.ಕೆ, ಶ್ರೀಜೇಶ್.ಟಿ, ಶ್ರೇಯಸ್ ಕೃಷ್ಣ.ಕೆ, ಸುಪ್ರೀತ.ಪಿ, ವಿಷ್ಣುಗೋಪಾಲ.ಟಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 161 ಮಂದಿ ಪರೀಕ್ಷೆ ಬರೆದಿದ್ದು 159 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 98.75% ಫಲಿತಾಂಶವನ್ನು ತಂದಿದ್ದಾರೆ. ಎಲ್ಲರಿಗೂ ಶುಭಾಶಯಗಳು...

04 April 2018

ನಮ್ಮ ಶಾಲೆಗೆ ‘ಟ್ಯಾಲೆಂಟ್ ಹಂಟ್’ ಪ್ರಶಸ್ತಿ


ಕೇರಳದಾದ್ಯಂತ ಚಿರಪರಿಚಿತವಾಗಿರುವ ಜಿ-ಟೆಕ್ ಕಂಪ್ಯೂಟರ್ ಸಂಸ್ಥೆಯು 2017-18ನೇ ಸಾಲಿನಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗಾಗಿ ಕಣ್ಣೂರಿನ ಶ್ರೀಪುರಂ ಶಾಲೆಯಲ್ಲಿ ನಡೆಸಿದ ಸೀನಿಯರ್ ವಿಭಾಗದ ‘ಟ್ಯಾಲೆಂಟ್ ಹಂಟ್ ಐಟಿ ಮತ್ತು ಐಕ್ಯೂ’ ಸ್ಪರ್ಧೆಯಲ್ಲಿ ನಮ್ಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನ ಗಳಿಸಿದೆ. ಪ್ರಥಮ ಸ್ಥಾನ ಪಡೆದ ಈ ಶಾಲೆಯ +2 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್.ಎಸ್ ಮತ್ತು ಯಶ್ವಿತ್.ವಿ ಹಾಗೂ ಉತ್ತಮ ಶಾಲೆಗಿರುವ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಬದಿಯಡ್ಕದ ಜಿ.ಟೆಕ್ ಸಂಸ್ಥೆಯಲ್ಲಿ ಜರಗಿತು. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 2,500 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಜಿ-ಟೆಕ್ ಸಂಸ್ಥೆಯ ವಲಯ ವ್ಯವಸ್ಥಾಪಕ ಮೃದುಲ್ ಮತ್ತು ಸಂಸ್ಥೆಯ ಬದಿಯಡ್ಕ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ವಿತರಿಸಿದರು. ಉತ್ತಮ ಶಾಲೆಗಿರುವ 25,000 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಿವಪ್ರಕಾಶ್.ಎಂ.ಕೆ ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

20 February 2018

ವಿಜ್ಞಾನೋತ್ಸವ ಮತ್ತು ಮಧುರ ಕನ್ನಡ ಘೋಷಣೆ


ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ವಿದ್ಯಾಸಂಸ್ಥೆಗಳು ಭದ್ರ ಬುನಾದಿಯನ್ನು ಹಾಕಿಕೊಡುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು ರಂಗಗಳಲ್ಲಿ ಮಿಂಚಲಿರುವ ಈ ಪುಟಾಣಿ ಪ್ರತಿಭೆಗಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಕಳೆದ ಕೆಲವಾರು ತಿಂಗಳಿನಿಂದ ಇಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಮಧುರ ಕನ್ನಡ ಯೋಜನೆಯ ಮೂಲಕ ಕನ್ನಡದಲ್ಲಿ ಹೆಚ್ಚಿನ ಪ್ರಾವೀಣ್ಯವನ್ನು ಪಡೆಯಲಿರುವ ತರಬೇತಿಯನ್ನೂ ನೀಡಲಾಗಿದೆ. ಅದೇ ರೀತಿಯಲ್ಲಿ ವಿಜ್ಞಾನೋತ್ಸವವನ್ನೂ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದು ಮಕ್ಕಳಿಗೆ ವಿಜ್ಞಾನದ ಮೇಲಿನ ಆಸಕ್ತಿಯನ್ನು ಹೆಚ್ಚಿಸಲಿದೆ.ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಜ್ಞಾನೋತ್ಸವ ಮತ್ತು ಮಧುರ ಕನ್ನಡ ಘೋಷಣೆ’ಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಹಿರಿಯ ಶಿಕ್ಷಕಿ ಸರಸ್ವತಿ.ಸಿ.ಎಚ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಶಿಕ್ಷಕಿ ಮಾಲತಿ.ಪಿ ಸ್ವಾಗತಿಸಿದರು. ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ವಂದಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಏಳನೇ ತರಗತಿಯ ಕಾರ್ತಿಕ್.ಕೆ.ಎಸ್ “ಲಿಟಲ್ ಸೈಂಟಿಸ್ಟ್” ಆಗಿ ಆಯ್ಕೆಯಾದನು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು.

25 January 2018

ವರ್ಧಂತ್ಯುತ್ಸವ 2018


“ವಿದ್ಯಾರ್ಥಿಯು ಬಾಲ್ಯದಲ್ಲಿಯೇ ತಾನು ಕೈಗೊಳ್ಳುವ ಕಾರ್ಯಗಳಲ್ಲಿ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳಬೇಕು. ದೇವರ ಮೇಲಿನ ಭಕ್ತಿ, ನಂಬಿಕೆಗಳು ನಮಗೆ ಏಕಾಗ್ರತೆಯನ್ನು ಬೆಳೆಸುವ ಸಾಮರ್ಥ್ಯವನ್ನೂ ತಂದುಕೊಡುತ್ತವೆ. ದೊರೆತ ಅವಕಾಶಗಳನ್ನು ತಿರಸ್ಕರಿಸದೆ, ಸೂಕ್ತ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸಿಕೊಳ್ಳುವುದೂ ಅಷ್ಟೇ ಅಗತ್ಯ” ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ.ಕೃಷ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಮತ್ತು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕಂಬಾರು ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಜಯಾ.ಎಸ್.ಭಟ್ ಮತ್ತು ಶ್ರೀಮತಿ ಸ್ಮಿತಾ ಶರ್ಮ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಾದ ಶ್ರೀಮತಿ ಸಿ.ಎಚ್.ಸರಸ್ವತಿ ಮತ್ತು ಎಚ್.ಸೂರ್ಯನಾರಾಯಣ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ಬಹುಮಾನಗಳನ್ನು ವಿತರಿಸಿದರು.

ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಶಿಕ್ಷಕಿ ವಿನೋದಿನಿ.ಕೆ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.